ELECTION NOTICE: DELAYS POSSIBLE , FOR INSTANT DELIVERY/BULK ORDERS | Call +91 70227 22566
ಬಟ್ಟೆ ಖರೀದಿಯ ವಿವಿಧ ಮಜಲುಗಳು

ಬಟ್ಟೆ ಖರೀದಿಯ ವಿವಿಧ ಮಜಲುಗಳು



ಲೋಕದಲ್ಲಿರುವ ಅಷ್ಟೂ ಶಾಪಿಂಗುಗಳಿಗಿಂತಲೂ ಬಟ್ಟೆಗಳ ಶಾಪಿಂಗು ಅತೀ ಕ್ಲಿಷ್ಟಕರವಾದದ್ದು ಅಂತ ನಂಗೆ ಕೆಲವೊಮ್ಮೆ ಅನಿಸುವುದಿದೆ. ಸರಿಯಾದ ಡಿಸೈನ್ ಇರುವ ಆಭರಣವಾದರೂ ಬೇಗ ದೊರಕೀತು, ಆದರೆ ಈ ಬಟ್ಟೆ ಉಂಟಲ್ಲss..ಖರೀದಿದಾರನನ್ನು ಕಾಡಿಸದೆ ಪೀಡಿಸದೆ ಅನಾಯಾಸವಾಗಿ ದೊರೆಯುವುದು ಜಗತ್ತಿನ ಅತೀ ವಿರಳ ಸಂಗತಿ. ಸರಿಯಾದ ಬಣ್ಣ, ಫಿಟ್ಟಿಂಗು ಅಂತ ಕೈಗೆ ಸಿಕ್ಕಿದ ಬಟ್ಟೆಗಳನ್ನೆಲ್ಲಾ ಪರಿಶೀಲಿಸುತ್ತಾ, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಅಲೆಯುತ್ತಾ, ಸಾಕಪ್ಪಾ ಸಾಕು ಎಂದಂದುಕೊಳ್ಳುವಷ್ಟರಲ್ಲಿ ನಮಗೊಪ್ಪುವ ಬಟ್ಟೆಯೊಂದು ಅದ್ಯಾವುದೋ ಅಂಗಡಿಯ ರ್‍ಯಾಕ್‌‌ನಲ್ಲೋ ಅಥವಾ ಹ್ಯಾಂಗರಿನಲ್ಲೋ ದುತ್ತನೆಂದು ಪ್ರತ್ಯಕ್ಷವಾಗುವ ಘಳಿಗೆಯುಂಟಲ್ಲ, ಅದೊಂದು ವಿಶಿಷ್ಟ ಅನುಭೂತಿ! ಬಹುಷಃ ದೇವರು ಹೀಗೆ ಎದುರಿಗೆ ಬಂದರೂ, ಇಷ್ಟೊಂದು ನೆಮ್ಮದಿ ದೊರೆಯದೇನೋ.



ಯಾವ ಯೋಚನೆಯೂ ಇಲ್ಲದೆ ನಮ್ಮ ಪಾಡಿಗೆ ಓದುತ್ತಾ, ಆಟವಾಡುತ್ತಾ ದಿನಗಳುರುಳುತ್ತಿದ್ದ ಕಾಲವಿತ್ತು. ವರ್ಷಕ್ಕೆರಡು ಬಾರಿ ಅಪ್ಪ-ಅಮ್ಮನೊಡನೆ ಸಾರಿಗೆ ಬಸ್ಸು ಹತ್ತಿ ಹತ್ತಿರದ ಶಹರದ ದೊಡ್ಡ ಜವುಳಿ ಅಂಗಡಿಗೆ ದಾಂಗುಡಿಯಿಟ್ಟು ಆ ವರುಷದ ಎಲ್ಲಾ ಹಬ್ಬ-ಸಮಾರಂಭಗಳಿಗೆ ಬೇಕಾಗುವಷ್ಟು ಬಟ್ಟೆಯನ್ನು ಕೊಂಡುತಂದು ಬೀಗುತ್ತಿದ್ದ ನಮಗೆ ಅದೊಂದು ದೊಡ್ಡ ಕೆಲಸವೆಂದು ಅನಿಸುತ್ತಲೇ ಇರಲಿಲ್ಲ. ಅಪ್ಪನೋ ಅಮ್ಮನೋ ಅವರಿಗಿಷ್ಟವಾದ ಬಟ್ಟೆಯನ್ನು ಎತ್ತಿಕೊಂಡು, ನಮ್ಮ ಷರಟನ್ನು ಕೆಲವೊಮ್ಮೆ ಶರಾಯಿಯನ್ನೂ ಅಲ್ಲಿಯೇ ಬಿಚ್ಚಿಸಿ ಟ್ರಯಲ್ ನೋಡುತ್ತಿದ್ದರು. ಸಣ್ಣವರಾಗಿದ್ದ ನಮಗೆ ಅದೆಲ್ಲಿಯ ನಾಚಿಕೆ? ಆ ಅಂಗಡಿಗಳಲ್ಲಿ ಟ್ರಯಲ್ ರೂಮು ಇರುತ್ತಿದ್ದವೋ ಇಲ್ಲವೋ ಗೊತ್ತಿಲ್ಲ. ಆಗಿನ ಕಾಲದಲ್ಲಿ ನಮ್ಮದೇನಿದ್ದರೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬಂತೆ ಅಲ್ಲೇ ಟ್ರೈ ಅಲ್ಲೇ ಪ್ಯಾಕ್!
ಕಾಲ ಸರಿಯುತ್ತಾ ನಮ್ಮ ಶಾಪಿಂಗ್ ಮಾದರಿ ಕೂಡ ಬದಲಾಯಿತು. ಬದಲಾವಣೆಯೇ ಜಗದ ನಿಯಮ ಅಲ್ಲವೇ…



ಮದುವೆಗೆ ಮೊದಲು ಒಂಟಿ ಸಿಂಹನಾಗಿದ್ದಾಗ ನನ್ನೆಲ್ಲ ಬಟ್ಟೆಯ ಖರೀದಿ ಆನ್ಲೈನ್ ನಲ್ಲೆ ನಡಿಯುತ್ತಿತ್ತು. ಅತೀ ಹೆಚ್ಚು ಡಿಸ್ಕೌಂಟ್ ಇರುವ ಬಟ್ಟೆಗಳೆಲ್ಲ ನನ್ನ ಶಾಪಿಂಗ್ ಕಾರ್ಟ್ ಗೆ ಸೇರಿಕೊಂಡು ಬಜೆಟ್ ಆಧಾರದ ಮೇಲೇ ಒಂದೊಂದಾಗಿ ನನ್ನ ತೆಕ್ಕೆಗೆ ಬೀಳುತ್ತಿತ್ತು. ಖರೀದಿಗೂ ಮೊದಲು ಟ್ರಯಲ್ ನೋಡುವ ವ್ಯವಸ್ಥೆ ಅಲ್ಲಿಲ್ಲವಾದುದರಿಂದ ಬಟ್ಟೆಯ ಅಸಲೀಯತ್ತು ತಿಳಿಯುತ್ತಿದ್ದದ್ದು ಮನೆಗೆ ಬಂದ ಕೊರಿಯರ್ ಪ್ಯಾಕು ಬಾಯಿ ತೆರೆದಮೇಲೆಯೇ! ಇದೊಂತರ ಲಕ್ಕಿಡಿಪ್ಪಿನ ಹಾಗೆ..ಸರಿಯಾಗಿ ಫಿಟ್ ಆದರೆ ಆಯಿತು, ಇಲ್ಲವಾದರೆ ಅದನ್ನು ಮರಳಿಸುವ ಸೌಲಭ್ಯವಂತೂ ಇದ್ದೇ ಇದೆ.



ಬಟ್ಟೆ ಶಾಪಿಂಗಿನ ಕರಾಳ ಅಧ್ಯಾಯ ಶುರುವಾದದ್ದು ನನ್ನ ಮದುವೆಯಾದ ಮೇಲೆ. ಮಡದಿಯ ಬಟ್ಟೆಗಳಿಗೆ ಒಪ್ಪುವ ಬಣ್ಣದ ಶರಟು, ಪ್ರತಿ ಕಾರ್ಯಕ್ರಮಕ್ಕೂ ಒಂದೊಂದು ಹೊಸ ಬಟ್ಟೆ – ಹೀಗೇ ವೈವಾಹಿಕ ಜೀವನದ ಬಹುಪಾಲು ಬಟ್ಟೆಗಳ ಖರೀದಿಯಲ್ಲೇ ಕಳೆದು ಹೋಗಿದೆ. ಮೊದಲಾದರೆ ಇದ್ದ ಕೆಲ ಬಟ್ಟೆಗಳಲ್ಲೇ ಕ್ರಮಪಲ್ಲಟನೆ – ಸಂಯೋಜನೆ ಮಾಡಿ ಹೇಗೋ ಆರಾಮಾಗಿದ್ದೆ. ಆದರೀಗ ಬಟ್ಟೆಯ ಬಣ್ಣಕ್ಕೆ ನನ್ನ ರಾಶಿಯೂ ಕುಣಿಕೆ ಹಾಕಿಕೊಂಡು ನನ್ನ ಬದುಕು ‘ವರ್ಣಮಯ’ವಾಗುವ ಬದಲು 90ರ ದಶಕದ ಸಿನಿಮಾದಂತಾಗಿದೆ. ಇತ್ತೀಚಿಗೆ ಏನಾಯ್ತು ಗೊತ್ತೇ…ಮಡದಿಯೊಡನೆ ಬಟ್ಟೆ ಖರೀದಿಗೆ ಹೋಗಿದ್ದೆ. ಅವಳಿಗಲ್ಲ, ನನಗೆ…ಬೇಗ ಮುಗಿಸಬಹುದು ಅಂದುಕೊಂಡರೆ ಆಗಿದ್ದೇ ಬೇರೆ. ಅಂಗಡಿ-ಅಂಗಡಿ ಸುತ್ತಿ ಕೊನೆಗೂ ಒಂದು ಮಳಿಗೆಯಲ್ಲಿ ನನ್ನಿಷ್ಟದ ಬಟ್ಟೆ ಸಿಕ್ಕಿತು. ಬಿಳಿ ಗೆರೆಗಳಿರುವ ಕಪ್ಪು ಬಣ್ಣದ ಶರಟು. ಟ್ರಯಲ್ ರೂಮಿನಲ್ಲಿ ಅದನ್ನು ತೊಟ್ಟು ಪೋಸು ಕೊಟ್ಟದ್ದೇ ಕೊಟ್ಟದ್ದು. ಅದನ್ನು ಹಾಕಿಕೊಂಡು ಅಲೆದಾಡುವ ಕನಸನ್ನು ಕಂಡದ್ದೇ ಕಂಡದ್ದು..ಕೊನೆಗೂ ನನಗೊಪ್ಪುವ ಬಟ್ಟೆ ಸಿಕ್ಕ ಖುಷಿಯಲ್ಲಿ ಇನ್ನೇನು ಬಿಲ್ ಮಾಡಿಸಬೇಕು ಅನ್ನುವಷ್ಟರಲ್ಲಿ ಮಡದಿಗೆ ಏನನ್ನಿಸಿತೋ ಏನೋ, ಮೊಬೈಲ್ ಕೈಗೆತ್ತಿಕೊಂಡು ಅದೇನೋ ಹುಡುಕತೊಡಗಿದಳು. ಅವಳು ಇಂತಹ ಸಮಯದಲ್ಲಿ ಫೋನು ಕೈಗೆತ್ತಿಕೊಂಡರೆ ಏನೋ ಎಡವಟ್ಟಾಗಿದೆ ಎಂದೇ ಅರ್ಥ. ನಾನು ಅವಳನ್ನೇ ನೋಡುತ್ತಾ ಅವಳ ಮುಂದಿನ ನಡೆಗೆ ಕಾಯುತ್ತಿದ್ದೆ. ಕೆಲ ಸೆಕೆಂಡುಗಳ ನಂತರ ಮುಖದಲ್ಲೊಂದು ವಿಷಣ್ಣ ಭಾವವನ್ನು ತುಂಬಿಕೊಂಡು ‘ಬೇಡ ಕಣ್ರೀ ಇದು, ನಿಮ್ಮ ರಾಶಿಗೆ ಕಪ್ಪು ಬಣ್ಣ ಆಗಿಬರುವುದಿಲ್ಲ’ ಎಂದು ಉಸುರಿದಾಗ ಕಪ್ಪು ಶರಟಿನ ಬಗ್ಗೆ ಕಂಡಿದ್ದ ಬಣ್ಣ ಬಣ್ಣದ ಕನಸುಗಳೆಲ್ಲಾ ಕರಗಿ ನಾನು ಪಾತಾಳ ಸೇರಿದ್ದೆ.



ಇಂತಹ ಹಲವು ಸಂಗತಿಗಳನ್ನು ಪರಿಗಣಿಸಿಯೇ ನಾನು ಬಟ್ಟೆಯ ಖರೀದಿಯನ್ನು ಅತೀ ಕಷ್ಟದ ಕೆಲಸ ಎಂದು ಪರಿಗಣಿಸಿದ್ದು. ಬಟ್ಟೆಯ ಹುಡುಕಾಟದಲ್ಲಿ ನಿತ್ರಾಣಗೊಂಡ ಒಬ್ಬರು ತಲೆತಿರುಗಿ ಬಿದ್ದ ಸುದ್ದಿಯೂ ಇತ್ತೀಚೆಗೆ ನನ್ನ ಕಿವಿಗೆ ಬಿದ್ದಿತ್ತು. ಇಡೀ ದಿನ ಏನೂ ತಿನ್ನದೇ ಪಟ್ಟಣದ ಸಣ್ಣ ಪುಟ್ಟ ಅಂಗಡಿಯಿಂದ ಹಿಡಿದು ಐಷಾರಾಮಿ ಜವುಳಿ ಅಂಗಡಿಯನ್ನು ಶೋಧಿಸಿದರೆ ತಲೆಸುತ್ತು ಬರದೇ ಇನ್ನೇನಾದೀತು, ನೀವೇ ಹೇಳಿ? ಅದೊಂದು ದಿನ ಆಕೆ ತನ್ನ ತಾಯಿಯ ಜೊತೆ ಮೈಸೂರು ಸಿಲ್ಕ್ ಸೀರೆಯ ಬೆನ್ನು ಹತ್ತಿ ನಗರದ ಪ್ರತಿಷ್ಠಿತ ಮಳಿಗೆಯನ್ನು ತಲುಪಿದ್ದರು. ಈ ಹುಡುಕಾಟದಲ್ಲಿ ಮಧ್ಯಾಹ್ನದ ಊಟವನ್ನು ಅವರು ಮರೆತಿದ್ದರು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಅಲ್ಲವೇ..ಮಗಳ ಕಡೆ ಗಮನ ಹರಿಸದ ತಾಯಿ ಮೂರಂತಸ್ತಿನ ಮಳಿಗೆಯನ್ನು ಚಂದದ ರೇಶಿಮೆ ಸೀರೆಗಾಗಿ ಇಂಚಿಂಚಾಗಿ ಹುಡುಕುತ್ತಿದ್ದರು. ಕೊನೆಯ ಮಹಡಿಯನ್ನು ತಲುಪಿದಾಗಲೇ ಮಗಳು ಜೊತೆಯಲ್ಲಿಲ್ಲ ಎಂಬ ಸಂಗತಿ ಅವರ ಅರಿವಿಗೆ ಬಂದದ್ದು! ಬೆಚ್ಚಿದ ತಾಯಿ ಭಯದಿಂದ ಒಂದೊಂದೇ ಮಹಡಿಯಲ್ಲಿ ಮಗಳನ್ನು ಹುಡುಕುತ್ತಾ ನೆಲಮಹಡಿ ತಲುಪಿದಾಗ ಆಕೆ ಅಲ್ಲೇ ಸುಸ್ತಾಗಿ ಒಂದು ಕುರ್ಚಿಯಲ್ಲಿ ಕೂತಿದ್ದಳಂತೆ. ಊಟ ಮಾಡದೇ ಇದ್ದುದರಿಂದ ತಲೆಸುತ್ತಿ ಅಲ್ಲೇ ಕುಸಿದು ಕೂತಿದ್ದಳು. ತಾಯಿಯ ಗಮನವೆಲ್ಲ ಇದ್ದದ್ದು ಸೀರೆಯ ಮೇಲೆ…ಅದರ ಬಣ್ಣದ ಮೇಲೆ…ಹಸಿದಿದ್ದ ಮಗಳು ತಲೆತಿರುಗಿ ಬಿದ್ದಾಳೆಂಬ ಸಣ್ಣ ಆಲೋಚನೆ ಅವರ ಮನದಲ್ಲಿ ಮೂಡಲು ಹೇಗೆ ಸಾಧ್ಯ ಹೇಳಿ?
ಇದನ್ನೆಲ್ಲಾ ಯೋಚಿಸಿದಾಗ, ಬಟ್ಟೆಗೆ ಇಷ್ಟೆಲ್ಲಾ ಮಹತ್ವ ಕೊಡಬೇಕಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ. ಯಾವುದೋ ಒಂದು ಶರಟಿಗೆ, ಇದ್ದ ಎರಡು ಜೀನ್ಸ್ ಗಳಲ್ಲಿ ಒಂದನ್ನು ಸಿಕ್ಕಿಸಿಕೊಂಡು ರಾಜಾರೋಷವಾಗಿ ಅಲೆಯುತ್ತಿದ್ದ ದಿನಗಳು ನೆನಪಿಗೆ ಬರುತ್ತವೆ. ಬಟ್ಟೆಗಳ ಆಯ್ಕೆಯ ವಿಷಯದಲ್ಲಿ ಸ್ವತಂತ್ರನಾಗಿದ್ದ ನನ್ನನ್ನು ನೋಡಿ ಮೆಚ್ಚಲು ಯಾರೂ ಇರಲಿಲ್ಲ, ಹಾ..ನಾನು ಯಾರನ್ನೂ ಮೆಚ್ಚಿಸಬೇಕಾಗಿಯೂ ಇರಲಿಲ್ಲ! ಆದರೆ ಈಗ ಹಾಗಲ್ಲ, ನಾನು ತಯಾರಾಗಿ ಹೊರ ಹೋಗಬೇಕೆಂದರೆ ಮಡದಿಯ ತೀಕ್ಷ್ಣ ಕಣ್ಣಿನ ಸ್ಕ್ಯಾನರ್ ನೋಟಕ್ಕೆ ಗುರಿಯಾಗಿ ಪಾಸಾಗಲೇಬೇಕು. ಒಂದು ಲೆಕ್ಕದಲ್ಲಿ ಒಳ್ಳೆಯದೇ ಆಯಿತು ಬಿಡಿ…ಆಗೆಲ್ಲ ಅಬ್ಬೇಪಾರಿಯಂತೆ ಕಾಣುತ್ತಿದ್ದ ನಾನು ಇಂದು ತಕ್ಕ ಮಟ್ಟಿಗೆ ಸಂಭಾವಿತನಂತೆ ಕಾಣಿಸುತ್ತೇನೆ. ಆದರೆ ಹೀಗೆ ಸಂಭಾವಿತನಂತೆ ಕಾಣಲು ಬೇಕಿರುವ ಬಟ್ಟೆಗಳ ಶಾಪಿಂಗ್ ಮಾತ್ರ ನುಂಗಲಾಗದ ತುತ್ತಾಗಿ ಆಗಾಗ ನನ್ನನ್ನು ಸತಾಯಿಸುತ್ತಲೇ ಇರುತ್ತದೆ.

– Karthik Krishna

  • Jul 28, 2023
  • Category: News
  • Comments: 0
Leave a comment