ಕರ್ನಾಟಕದ ಅಚ್ಚುಮೆಚ್ಚಿನ ವಾಹಿನಿಯಾದ ಜೀ ಕನ್ನಡ ಹತ್ತು ವರ್ಷಗಳನ್ನು ಪೂರೈಸಿ ಕಿರುತೆರೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಈ ದಶಕದ ಯಶಸ್ಸನ್ನು ಸಂಭ್ರಮಿಸಲು ‘ದಶಕದ ಸಂಭ್ರಮ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಜೀ ವಾಹಿನಿ ರೂಪಿಸಿದೆ.
ಜೀ ಕನ್ನಡದ ಈ ವಿಶಿಷ್ಟ ಸಾಧನೆಯನ್ನು ಅವಿಸ್ಮರಣೀಯಗೊಳಿಸಲು, ಕಳೆದ ದಶಕದಲ್ಲಿ ಶ್ರೇಷ್ಠ ಸಾಧನೆ ಮಾಡಿದ ಮನೋರಂಜನೆಯ ಕ್ಷೇತ್ರದ ಘಟಾನುಘಟಿಗಳ ಜೊತೆ ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಸಾಧಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ‘ದಶಕದ ಕನ್ನಡಿಗರು’ ಎಂಬ ವಿಶೇಷ ಗೌರವವನ್ನಿತ್ತು ಸನ್ಮಾನಿಸಲು ಜೀ ಕನ್ನಡ ಭರ್ಜರಿ ತಯಾರಿ ನಡೆಸಿದೆ.
2006-2016ರ ಈ ಒಂದು ದಶಕ ಅನೇಕ ಪ್ರಮುಖ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಮನೋರಂಜನಾ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲೂ ಸಹ, ಪ್ರಮುಖ ಬೆಳವಣಿಗೆಗಳಾಗಿರುವುದು ಗಮನಾರ್ಹ. ಕನ್ನಡ ಚಿತ್ರರಂಗಕ್ಕೆ ಹಲವು ತಾರೆಯರ ಪರಿಚಯವಾಗಿ, ದಿಗ್ಗಜರಾಗಿ ಬೆಳೆದ ಕಥೆಗಳು, ಧೃವತಾರೆಯರಂತೆ ರಾರಾಜಿಸುತ್ತಿದ್ದವರು ಕಷ್ಟದ ದಿನಗಳನ್ನು ಕಂಡು, ಪುನಃ ವಾಪಸಾತಿ ಪಡೆದ ಕಥೆಗಳು ರೋಚಕವಾಗಿವೆ. ನಟನೆ, ನಿರ್ದೇಶನ, ಸಂಗೀತ, ಸಾಹಿತ್ಯ, ಗಾಯನ, ಹಾಸ್ಯ, ಹೀಗೆ ಎಲ್ಲಾ ವಿಭಾಗಗಳಲ್ಲೂ ಅನೇಕ ಪ್ರತಿಭೆಗಳು ಕಳೆದ ದಶಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಜೀ ಕನ್ನಡದ ಈ ಮಹಾತಾರಾಮೇಳದಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಇತರ ಕ್ಷೇತ್ರದ ಗಣ್ಯರು, ಜೀ ಕನ್ನಡದ ದಶಕದ ಸಾಧನೆಯ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದ ಅನೇಕ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಲು ಒಪ್ಪಿದ್ದು, ಎಷ್ಟೋ ಸೂಪರ್ ಸ್ಟಾರ್ ಗಳು ವೇದಿಕೆಯ ಮೇಲೆ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಲು ತಯಾರಿಯಲ್ಲಿ ನಿರತರಾಗಿದ್ದಾರೆ.
‘ದಶಕದ ಸಂಭ್ರಮ’ ಕಾರ್ಯಕ್ರಮವು ಇದೇ ಆಗಸ್ಟ್ 6, ಶನಿವಾರ, ಕಂಠೀರವ ಒಳಾಂಗಣ ಕ್ರೀಡಾಂಗಣ, ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದು, ಈಗಾಗಲೇ ಜೀ ವೀಕ್ಷಕರಿಗೆ ಉಚಿತ ಪಾಸುಗಳನ್ನು ವಿತರಿಸುವ ಕಾರ್ಯ ಶುರುವಾಗಿದೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಸಂಚಲನ ಮೂಡಿಸುತ್ತಿರುವ ಜೀ ಕನ್ನಡದ ಈ ಕಾರ್ಯಕ್ರಮದ ಬಗ್ಗೆ ಭಾರೀ ನಿರೀಕ್ಷೆಗಳಿದ್ದು, ಕನ್ನಡ ಕಿರುತೆರೆ ಇತಿಹಾಸದಲ್ಲೇ ಒಂದು ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆಯೆಂದು ಬಿಂಬಿಸಲಾಗುತ್ತಿದೆ.
No products found in this collection.