
WWEಯ ಅಖಾಡಲ್ಲಿ ನಮ್ಮ ಬಾಲ್ಯ!
ನೀವೇನೇ ಹೇಳಿ, ತೊಂಬತ್ತರ ದಶಕದಲ್ಲಿ ಧರೆಗೆ ಇಳಿದವರೇ ಪುಣ್ಯವಂತರು. ಜಗತ್ತು ಹೇಗೆ ಬದಲಾಯಿತು ಎಂದು ಇವರನ್ನು ಕೇಳಿ ನೋಡಿ, ಸ್ವ-ಅನುಭವಗಳ ರಾಶಿ ರಾಶಿ ಉದಾಹರಣೆಗಳನ್ನು ಕೊಟ್ಟು ಪ್ರಶ್ನೆ ಕೇಳಿದವನ ಮಂಡೆಯನ್ನು ಮಾಹಿತಿಗಳಿಂದ ತುಂಬಿಸಿ ಕಳಿಹಿಸುತ್ತಾರೆ. ಅವರಿಗೆ ರೋಟರಿ ಡಯಲ್ ನ ಫೋನ್ ಬಳಸುವುದೂ ಗೊತ್ತು, ಕೀಪ್ಯಾಡ್ ಫೋನ್ಗಳು ನಿಧಾನಕ್ಕೆ ಸ್ಮಾರ್ಟ್ ಫೋನುಗಳಾಗಿ ಬದಲಾದದ್ದೂ ಗೊತ್ತು. ದೊಡ್ಡ ಬಾಣಲೆಯಾಕಾರದ ಡಿಶ್ ಗಳನ್ನು ತಿರುಗಿಸಿ, ಬರುತ್ತಿದ್ದ ಕೆಲ ಟಿವಿ ಚಾನೆಲ್ ಗಳನ್ನು ಟ್ಯೂನ್ ಮಾಡುವುದೂ ಗೊತ್ತು, ಕಾಲ ಕ್ರಮೇಣ ಬಾಣಲೆಯ ಗಾತ್ರ ಕಡಿಮೆಯಾಗಿ ನೂರಾರು ಚಾನೆಲ್ ಗಳ ಒಂದೇ ಸೆಟ್ ಅಪ್ ಡಬ್ಬಿಯಿಂದ ಟಿವಿ ಪರದೆಯ ಮೇಲೆ ಬರುವಂತಾದ್ದೂ ಗೊತ್ತು. ಜಗತ್ತು ಕ್ಷಿಪ್ರ ಬದಲಾವಣೆಗೆ ತನ್ನನ್ನು ಒಡ್ಡಿಕೊಂಡಾಗ ಬೆರಗು ಗಣ್ಣಿನಿಂದ ಅದಕ್ಕೆ ಸಾಕ್ಷಿಯಾದ ಇವರು, ಅತ್ತ ವಯಸ್ಕರೊಂದಿಗೂ ಇರಲಾಗದೇ ಇತ್ತ Generation Z, Generation Alphaಗಳೊಂದಿಗೂ ಏಗಲಾಗದೆ ಆಗಾಗ ನಾಸ್ಟಾಲ್ಜಿಯಾಗೆ ಶರಣಾಗಿ ಬಾಲ್ಯವನ್ನು ನೆನೆಯುತ್ತಾ, ಅಲ್ಲಿನ ಪ್ರತಿ ವಿವರಗಳನ್ನು ಕಲೆಹಾಕುತ್ತಾ 'ನಮ್ ಬಾಲ್ಯನೇ ಬೆಸ್ಟು' ಎಂದು ರಾಜಾರೋಷವಾಗಿ ಬೀಗುವುದು, ಮೂವತ್ತರ ಹರೆಯದ ಆಸುಪಾಸಿನಲ್ಲಿ ಅವರೆಲ್ಲರೂ ಇರುವ ಈ ಕಾಲಘಟ್ಟದ ಒಂದು ಸಾಮಾನ್ಯ ಸಂಗತಿ.
ಇಂತಿಪ್ಪ ಪೀಳಿಗೆಯವರ ಬಾಲ್ಯ ಜೀವನದ ಒಂದು ಅವಿಭಾಜ್ಯ ಅಂಗವೇ WWE. ಅದೇ... ಹಿಂದೊಮ್ಮೆ WWF ಎಂದು ಕರೆಸಿಕೊಳ್ಳುತ್ತಿದ್ದ, ಅದನ್ನು ನೋಡಿದಾಗಲೆಲ್ಲ ಮನೆಯ ಹಿರಿಯರು ನಮ್ಮನ್ನು ಬಾಯ್ತುಂಬ ಬೈಯುತ್ತಿದ್ದ 'ಫೈಟಿಂಗ್' ಕಣ್ರೀ! ಇದರ ಬಗ್ಗೆ ಯಾವ ಮಟ್ಟದ ಕ್ರೇಜ್ ಇತ್ತೆಂದರೆ, ನಮ್ಮ ಶಾಲಾದಿನಗಳ ಮುಂಜಾವುಗಳು ತೆರೆದುಕೊಳ್ಳುತ್ತಿದ್ದದ್ದೇ ಹಿಂದಿನ ದಿನ ನಡೆದ 'ಹೊಡೆದಾಟ'ದ ಚರ್ಚೆಯಿಂದ. 'ಜಾನ್ ಸೀನ ಎಂತ ಹೊಡ್ದ ಮರೇ', 'ಫುಲ್ ಕತ್ತಲಾಗಿ ಅಂಡರ್ ಟೇಕರ್ ಬಂದಾಗ ಸ್ಟೇಜ್ ಮೇಲಿದ್ದವ ಹೇಗೆ ನಡುಗಿದ ಅಲಾ', 'ಅವ ಎಂತ ಮರೆ ಬುಗಿಮ್ಯಾನ್, ಹುಳ ತಿನ್ನುದು, ಛೀ ಛೀ', 'ರೇ ಮಿಸ್ಟೀರಿಯೋ ನ ಮುಖ ಕಾಣಿಸ್ತಿತ್ತು, ಜಸ್ಟ್ ಮಿಸ್' - ಅಲ್ಲಿನ ಹೊಡೆದಾಟಗಳು ನಿಜವೆಂದು ನಾವು ನಂಬಿದ್ದ ಆ ಕಾಲದ ಚರ್ಚೆಗಳು ಅದೆಷ್ಟು ತೀವ್ರವಾಗಿರುತ್ತಿದ್ದವೆಂದರೆ, ಮನೆಗೆ ಬಂದು ತಲೆದಿಂಬನ್ನೇ ಎದುರಾಳಿ ಎಂದುಕೊಂಡು, ನೆಚ್ಚಿನ ಸ್ಟಾರ್ ನಂತೆ ಅಭಿನಯಿಸಿ, ಅವನ ಹಿನ್ನಲೆ ಸಂಗೀತವನ್ನು ಕಲ್ಪಿಸಿಕೊಂಡು, ದಿಂಬಿಗೆ ಯರಾಬಿರಿ ಚಚ್ಚುತ್ತಿದ್ದೆವು. ಕೆಲವೊಮ್ಮೆ ಆ ಎದುರಾಳಿ ನಮ್ಮ ಅಣ್ಣನೋ-ತಮ್ಮನೋ ಆಗಿರುತ್ತಿದ್ದದ್ದೂ ಉಂಟು. WWEಯ ವಿಚಾರ ಬಂದಾಗ ನನ್ನ ಬಾಲ್ಯಕ್ಕೆ ಗಟ್ಟಿಯಾಗಿ ಬಿಗಿದುಕೊಂಡ ಒಂದು ಘಟನೆ ಆಗಾಗ ನೆನಪಾಗಿ ಕಾಡುತ್ತಿರುತ್ತದೆ. ಹೇಳುವೆ ಕೇಳಿ.
ಶಿಕ್ಷಕಿಯಾಗಿದ್ದ ನನ್ನಮ್ಮ ಮನೆಗೆ ಬರುವಾಗ ಸಂಜೆ ನಾಕುವರೆಯಾಗುತ್ತಿತ್ತು. ನಾನು ಹಾಗೂ ನನ್ನ ತಮ್ಮ ನಾಕು ಹತ್ತಕ್ಕೆಲ್ಲ ಮನೆಯಲ್ಲಿ ಇರುತ್ತಿದ್ದೆವು. ನಮ್ಮ ದೂರದ ಸಂಬಂಧಿಯೊಬ್ಬರು ನಮ್ಮ ಮನೆಯ್ಲಲ್ಲೇ ಉಳಿದಿಕೊಂಡು ವಿದ್ಯಾಭ್ಯಾಸ ನಡೆಸುತ್ತಾ ನಮಗೆ ಅಣ್ಣನಂತೆಯೇ ಇದ್ದುಬಿಟ್ಟಿದ್ದರು. ಎಂದಿನಂತೆ ಅಂದೂ ಕೂಡ ಅಮ್ಮ ಬರುವ ಮೊದಲೇ ನಾವು ಮೂರು ಜನ ಮನೆ ಸೇರಿದ್ದೆವು. ಚಹಾ, ಅವಲಕ್ಕಿ ತಿಂದು ಆ ದಿನದ ಹೋಂ ವರ್ಕ್ ಮುಗಿಸಬೇಕಿತ್ತು. ಆದರೆ ಹಾಗೆ ಮಾಡದೆ, ಮೂರು ಜನರೂ ಒಂದೊಂದು ದಿಂಬು ತೆಗೆದುಕೊಂಡು ಫೈಟಿಂಗ್ ಶುರು ಮಾಡಿದೆವು. ಹೇಳುವುದ ಮರೆತೇ ನನ್ನ ತಮ್ಮ ಆಗ ಚಿಕ್ಕವನು. ಎರಡು ಅಥವಾ ಮೂರನೇ ಕ್ಲಾಸ್ ಇರಬೇಕು. ಅವನು ನನ್ನ ಪರ. ನಿಮಗೆ wwe ನಿಯಮ ಗೊತ್ತಿದ್ದರೆ, ಅದೊಂದು ಹ್ಯಾಂಡಿಕ್ಯಾಪ್ ಮ್ಯಾಚ್! ನಾನು-ತಮ್ಮ ಒಂದು ತಂಡ, ಅಣ್ಣ ಎದುರಾಳಿ. ನಿಧಾನಕ್ಕೆ ಏಟಾಗದ ಹಾಗೆ Ankle Lock, Spear, Pedigree, DDT ಮುಂತಾದ ಹೊಡೆತಗಳನ್ನು ಕೊಡುತ್ತಾ, ಏಟಾದಂತೆ-ಸುಸ್ತಾದಂತೆ ನಟಿಸುತ್ತಾ, ಕೌಂಟ್ ಡೌನ್ ಮಾಡುತ್ತಾ, ಆಟದಲ್ಲಿ ಮುಳುಗಿದ್ದ ನಮಗೆ ಅಂದು ಅಮ್ಮ ಬಂದು ಬಾಗಿಲ ಬಳಿ ನಿಂತದ್ದೇ ಗೊತ್ತಾಗಿರಲಿಲ್ಲ.
ಮಂಗಳವಾರ ಸಂಜೆಯ Smackdown ಪಂದ್ಯದಲ್ಲಿ ಬೆಲ್ಟ್ ಗೋಸ್ಕರ ಹೊಡೆದಾಡುತ್ತಿದ್ದ ನಮಗೆ ಅಮ್ಮನ ಆಗಮನದ ಸುಳಿವಾದರೂ ಹೇಗೆ ಸಿಕ್ಕೀತು ನೀವೇ ಹೇಳಿ! ಗೊತ್ತಾದದ್ದು, ನನ್ನ ಬೆನ್ನಿಗೊಂದು ಏಟು ಚಟ್ಟನೇ ಬಿದ್ದಾಗ. ಅದೇ ವೇಗದಲ್ಲಿ ಅಣ್ಣನ ಬೆನ್ನಿಗೂ ಎರಡೇಟು ಬಿದ್ದಾಗ ನಾವು ಪೂರ್ತಿಯಾಗಿ ವಾಸ್ತವ ಪ್ರಪಂಚಕ್ಕೆ ಬಂದಿದ್ದೆವು. ಅಲ್ಲಿಂದ ಶುರು ಆಯ್ತು ನೋಡಿ, ಅಮ್ಮನ ಪ್ರತಾಪ. ಅದ್ಯಾವ ಘಳಿಗೆಯಲ್ಲಿ ಅಪ್ಪನ ಬೆಲ್ಟು ಅಮ್ಮನ ಕೈಗೆ ಬಂದಿತ್ತೋ, WWE ಸ್ಟಾರ್ ಗಳನ್ನು ಮೀರಿಸಿದ ಪಂಚ್ ಗಳನ್ನು ಅಮ್ಮ ನಮ್ಮತ್ತ ಬೀಸಿದ್ದಳು. ಜೊತೆಗೆ ಹಿನ್ನಲೆ ಸಂಗೀತವೆಂಬತೆ ರಾಶಿ ಬೈಗುಳಗಳೂ ಅವಳಿಂದ ನಿರಂತರವಾಗಿ ಮೊಳಗುತ್ತಿದ್ದವು. ಇಷ್ಟೆಲ್ಲಾ ರಾದ್ಧಾಂತ ನಡೆಯುತ್ತಿದ್ದಾಗ, ಆಟದಲ್ಲಿ ಜೊತೆಗೇ ಇದ್ದ ತಮ್ಮ, ಕುಸ್ತಿಯ ಅಖಾಡಕ್ಕೆ ಅಮ್ಮನ ಪ್ರವೇಶವಾದಂತೆಯೇ ಮಾಯವಾಗಿದ್ದ. ಆವೇಶವನ್ನು ತಗ್ಗಿಸಿಕೊಂಡ ಅಮ್ಮ, 'ಪುಟ್ಟಾ ಪುಟ್ಟಾ' ಎಂದು ತಮ್ಮನನ್ನು ಕರೆಯುತ್ತಾ ಮನೆಯಿಡೀ ಹುಡುಕಿದರೂ ಅವನು ಕೈಗೆ ಸಿಗಲಿಲ್ಲ. ಕರೆದು ಕರೆದು ಸುಸ್ತಾಗಿ, 'ಬಾ.. ನಿಂಗೆ ನಾನು ಹೊಡೆಯಲ್ಲ' ಎಂದು ಅಗ್ರಿಮೆಂಟ್ ಬರೆದು ಕೊಟ್ಟಮೇಲೆಯೇ ಆತ ಅಮ್ಮನ ಕರೆಗೆ ಓಗುಟ್ಟಿದ್ದು. ದನಿಯ ಜಾಡನ್ನು ಹಿಡಿಯುತ್ತಾ ಹೋದ ನಮಗೆ ಆತ ಕಾಣಿಸಿದ್ದು ಎಲ್ಲಿ ಗೊತ್ತಾ? ನಾವು ರಿಂಗ್ ಎಂದು ಭಾವಿಸಿ ಕುಸ್ತಿ ನಡೆಸುತ್ತಿದ್ದ ಮಂಚದ ಕೆಳಗೆ. ಅಮ್ಮನ ಮೊದಲ ಏಟು ನನಗೆ ಬಿದ್ದದ್ದೇ ತಡ, ಅವನು ಕುಳ್ಳ ಕುಸ್ತಿಪಟು Hornswoggle, ರಿಂಗ್ ನ ಕೆಳಗೆ ನುಸುಳಿದಂತೆ, ಸರಕ್ಕೆಂದು ಮಂಚದ ಕೆಳಗೆ ನುಗ್ಗಿಬಿಟ್ಟಿದ್ದ.
ಅವನನ್ನು ನೋಡಿದ್ದೇ ತಡ ಅಮ್ಮನ ಸಿಟ್ಟೆಲ್ಲ ಕರಗಿ, ಅಳುತಿದ್ದ ಅವನನ್ನ ಎತ್ತಿ ಮುದ್ದಾಡಿ, 'ನೀ ಎಂತ ಮಗ, ಆ ಮಂಗಗಳ ಜೊತೆ ನೀನೂ ಸೇರುದಾ?' ಅಂತ ಅವನ ಕಣ್ಣೀರು ಒರೆಸುತ್ತಾ ಒಮ್ಮೆ ನಮ್ಮನ್ನು ದುರುಗುಟ್ಟಿ ನೋಡಿ “ಇನ್ನೊಂದ್ ಸರ್ತಿ ಆಡಿ, ನೋಡ್ತೇನೆ ಆಗ” ಎಂದು ಮಾತಲ್ಲೇ ಕಪಾಳ ಮೋಕ್ಷ ಮಾಡಿ ಬಿರ ಬಿರನೆ ಹೊರ ಹೋದರು. ಬಹುಷಃ ಅದೇ ಕೊನೆಯಿರಬೇಕು, ಮತ್ತೆಂದೂ ಮನೆಯಲ್ಲಿ ಕುಸ್ತಿ ನಡೆಯಲಿಲ್ಲ. ಎರಡು ದಿನ ನನ್ನೊಡನೆ ಮಾತು ಬಿಟ್ಟಿದ್ದ ಅಮ್ಮನನ್ನ ಮೆಚ್ಚಿಸಲು ನಾನು wwe ನೋಡುವುದನ್ನೇ ತ್ಯಜಿಸಬೇಕಾಯ್ತು. ಕಾಲ ಕ್ರಮೇಣ ಕದಡಿದ್ದ ಮನೆಯ ವಾತಾವರಣ ಕೊಂಚ ತಿಳಿಯಾಗಿ ಅಮ್ಮನಿಲ್ಲದ ವೇಳೆಯಲ್ಲಿ ಆಗೊಮ್ಮೆ ಈಗೊಮ್ಮೆ wwe ನೋಡುವುದು ಮತ್ತೆ ಮುನ್ನೆಲೆಗೆ ಹೇಗೆ ಬಂದಿತೋ ಗೊತ್ತಿಲ್ಲ. ಆದರೆ ಕೈ ಮಿಲಾಯಿಸಿ ಹೊಡೆದಾಡುವ ಧೈರ್ಯ ಮಾತ್ರ ಅಮ್ಮನ ಕೋಪದ ಮುಂದೆ ಶಾಶ್ವತವಾಗಿ ಕಮರಿಹೋಯಿತು. ನೋಟ್ ಪುಸ್ತಕಗಳಿಗೆ ಸ್ಟಾರ್ ಗಳ ಫೋಟೋಗಳಿರುವ ಲೇಬಲ್ ಹಾಕುವುದರಿಂದ ಹಿಡಿದು ಕಾರ್ಡ್ ಆಟದ ತನಕ, ನಮ್ಮ ಬಾಲ್ಯ ಜೀವನದ ನೆನಪುಗಳಲ್ಲಿ WWE ಎಂದಿಗೂ ಹಸಿರಾಗಿ ಉಳಿದಿದೆ. ಕುಸ್ತಿಪಟುಗಳು ಆಡುವುದು ಕೇವಲ ಮನರಂಜನೆಗಾಗಿ ಹಾಗೂ ಎಲ್ಲವೂ ಪೂರ್ವ ನಿರ್ಧರಿತ ಎಂಬುದೀಗ ಅರಿವಿಗೆ ಬಂದರೂ ಅದೆಲ್ಲ ನಿಜವೆಂದು ಭ್ರಮಿಸಿ ನಮ್ಮದೇ ಜಗತ್ತಿನಲ್ಲಿ ಗುದ್ದಾಡುತ್ತಿದ್ದ ದಿನಗಳಿವೆಯಲ್ಲ, they are priceless!
- Karthik Krishna
ಇದನ್ನ ಓದ್ತಾ ಇದ್ರೆ ನಂಗೆ ನಮ್ ಅಣ್ಣ ನ ನೆನಪು ಆಗ್ತಾ ಇತ್ತು. ತುಂಬ chennag ಇದೆ article. Nostalgia feel ಕೊಡತ್ತೆ ಓದ್ತಾ ಇರುವಾಗ🥰